Tuesday, January 27, 2009

ನನ್ನ 'ಸು' ಗೆ

ನನ್ನ 'ಸು' ಗೆ,

ಹಿಂದಿನ ವರ್ಷ ಇದೇ ದಿನದಂದು ನೀನು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಎಳ್ಳು ಬೆಲ್ಲ ಹಂಚಲು ಬಂದಾಗ, ನಾಚದೇ ನಾನು ನಿನ್ನ ಬಟ್ಟಲಿನಿಂದ ಬಾಚಿದ್ದೆ, ನೆನಪಿದೆಯಾ..? ನೀನು ನನ್ನ ಮುಖವನ್ನೂ ನೋಡದೆ ನೀಲಿ ಜರೀ ಲಂಗವನ್ನು ಎತ್ತಿ ಓಡುವಾಗ ನಿನ್ನ ಗೆಜ್ಜೆಗಳನ್ನೇ ಕೇಳುತ್ತಾ ನಿಂತಿದ್ದೆ ನಾನು...
ನಿನ್ನ ನಾ ಬಸ್ಸಲ್ಲೇ ನೋಡಿದ್ದೆ.. ಸುಮ್ಮನೆ ನೋಡುತ್ತಾ ನಿಂತಿರುತ್ತಿದ್ದೆ..ಕಂಡಕ್ಟರನ ಬಳಿ ಎರ್ಅಡು ರೂಪಾಯಿ ಚಿಲ್ಲರೆಗೆ ಜಗಳವಾಡುವಾಗ, ಚಪ್ಪಲಿ ಮೆಟ್ಟಿ ನಿನ್ನ ಹಿಂದೆ ನಿಂತ ದಪ್ಪ ಹೆಂಗಸು ಮೈಮೇಲೆ ಬಿದ್ದಾಗ ನೀನು ದಬಾಯಿಸುವಾಗ, ಪಕ್ಕದ ಸೀಟಿನಲ್ಲಿ ಕುಳಿತ ಹೆಂಗಸಿನ ಪುಟ್ಟ ಮಗು ನಿನ್ನ ಉದ್ದ ಜಡೆ ಎಳೆಯುವಾಗ ನಾನಲ್ಲೇ ಇರುತ್ತಿದ್ದೆ.. ನೀನು ನನ್ನ ನೋಡಲಿಲ್ಲವೋ, ನೋಡಿದರೂ ನೋಡದಂತೆ ನಟಿಸಿದೆಯೋ ನಾಕಾಣೆ.. ಆದರೆ ಅಂದೇ ನೀನು ಆವರಿಸಿದ್ದೆ.. ಅದಾದ ಮೇಲೇ ನಾನು ಪೌಡರ್ ಹಚ್ಚಿಕೊಂಡು ಒಮ್ಮೆ ಕಾಲೇಜಿಗೆ ಬಂದದ್ದು..

ನೀನು ನನ್ನ ಕ್ಲಾಸಿನಲ್ಲೇ ಕುಳಿತಿದ್ದರೂ ನಿನ್ನನ್ನು ನಾನು ಮಾತಾಡಿಸಲಿಲ್ಲ.. ಆ ಸಂಕ್ರಾಂತಿಯ ದಿನ ನೀನು ಜರೀ ಲಂಗ ತೊಟ್ಟು ಬರುವವರೆಗೂ.. ನನ್ನ ಮುಂದೆ ಎಳ್ಳು ಬೆಲ್ಲ ತುಂಬಿದ ಬಟ್ಟಲು ಹಿಡಿಯುವವರೆಗೂ.. "ಎಲ್ಲಾ ನನಗೇನಾ? " ಅಂತ ಒಂದು ಕೈಮುಷ್ಠಿ ತುಂಬಾ ಎಳ್ಳು ಬೆಲ್ಲ ಬಾಚಿಕೊಂಡಿದ್ದೆ.. ನನ್ನ ಆ ಪ್ರಶ್ನೆ ಬರೀ ಎಳ್ಳುಬೆಲ್ಲಕ್ಕಾಗಿರಲಿಲ್ಲ... ನಿನ್ನ ಬಾಳಿನ ಎಳ್ಳು ಬೆಲ್ಲದ ಸಂದರ್ಭಗಳಲ್ಲಿ ಪಾಲು ಕೇಳಲಾಗಿತ್ತು.. ನೀನು ಏನೂ ಉತ್ತರಿಸದೆ ತಲೆ ತಗ್ಗಿಸಿ ಓಡಿ ಹೋದಾಗ ನನಗೆ ಗೆಲುವಿನ ಸೂಚನೆ ಸಿಕ್ಕಿತ್ತು.. ಮರುದಿನ ನೀನು ಇನ್ನೊಂದು ಬಟ್ಟಲು ತುಂಬಾ ಬೆಲ್ಲ ಮಾತ್ರ ತಂದು "ಎಲ್ಲಾ ನಿನಗೇನೇ.." ಅಂದೆ.. ಅಂದೇ ನಾ ಗೆದ್ದಿದ್ದೆ..

ಅದಾದ ಮೇಲೆ ನಾವು ಕಾಲೇಜಿಗೆ ಬಂಕ್ ಹೊಡೆದ ದಿನಗಳೆಷ್ಟೋ.. ಕಾಮತ ಹೋಟಲಿನ ತಂಪು ಕೋಣೆಯ ಒಳಗೆ ಕುಡಿದ ಬಿಸಿ ಕಾಫಿಗಳೆಷ್ಟೋ.. ಶರಾವತಿ ನದೀ ಬ್ರಿಡ್ಜ್ ಮೇಲೆ ನಿನ್ನ ನೋಡುತ್ತಾ ಸಿಪ್ಪೆ ತೆಗೆಯದೇ ಬಾಯಿಗೆ ಹಾಕಿದ ಕಡಲೇಕಾಯಿಗಳೆಷ್ಟೋ.. ಸಂಜೆಯ ಹೊತ್ತಿಗೆ ನಾವಿಬ್ಬರೂ ಸೇರಿ ಲೆಕ್ಕ ಮಾಡಿದ ಬಂದರದ ಹಡಗಿನ ಪತಾಕೆಗಳೆಷ್ಟೋ.. ಕೇವಲ ವಾರದೊಳಗೆ ನಾವು ನಮ್ಮೊಳಗೆ, ಒಬ್ಬರೊಳಗೊಬ್ಬರು ಬೆಳೆದಿದ್ದೆವು.. ಕಾಸರಕೋಡಿನ ಹಂಚಿನ ಕಾರ್ಖಾನೆಯ ಹೊಗೆ ನೋಡುತ್ತಿರುವಾಗಲೇ, ನೀ ಹೇಳಿದ ಮೇಲೇ ನನಗೆ ನೆನಪಾಗಿದ್ದು.. ನಾಡಿದ್ದು ಕೊಳಗದ್ದೆ ತೇರು ಎಂದು..

ಬಹುಶಃ ನನ್ನಲ್ಲಿಂದಲೇ ನಿನ್ನನ್ನು 'ಸು' ಎಂದು ಕರೆಯಲು ಪ್ರಾರಂಭಿಸಿದ್ದೆ ಅನಿಸುತ್ತದೆ.. ಯಾಕೆ ಅಂತ ನೀನು ಕೇಳಿದಾಗ ಉತ್ತರ ಹುಡುಕಲು ಹೋಗಿ ಸಿಗದೆ 'ಸು'ಮ್ಮನೆ- 'ಸು' , ನನ್ನ ಮನಸಿನ ಕೊನೆಯಕ್ಷರ .. ಅಂದರೆ ಓಡುವ ಮನ'ಸು' ನೆಲೆಕಂಡುಕೊಂಡು ನಿಂತಿದ್ದು ನಿನ್ನಲ್ಲೇ.. ಅಂತೆಲ್ಲಾ ಮಾತಾಡಿದ್ದೆ.. ಜಾತ್ರೆಯ ದಿನ ಅಮ್ಮನ ಜೊತೆಯಲ್ಲಿ ಬಂದು ಬಳೇ ಅಂಗಡಿಯ ಕನ್ನಡಿಯಲ್ಲೇ ನೀನು ನನ್ನನ್ನು ನೋಡುತ್ತಿದ್ದಾಗ ನಿನ್ನ ಅಮ್ಮ ಕಾವಲುಗಾರ ಗುಮ್ಮನಂತೆ ಕಂಡದ್ದು ಸುಳ್ಳಲ್ಲ..'ನಾನು ನೀನು ಐಸ್ ಕ್ರೀಂ ತಿನ್ನೋದು' ಅಂತ ಮೊದಲೇ ಹೇಳಿದ್ದು ನೀನೇ ತಾನೇ.. ಮತ್ಯಾಕೆ ಮರೆತೆ? ನನ್ನ ಜೊತೆ ಮಾತೂ ಆಡಲಿಲ್ಲ.. ಆಗ ಬಂದು ಸಣ್ಣ ಮುನಿಸು ಮಾಯವಾಗಿದ್ದು-ತೇರಿಗೆ ಬಾಳೆ ಹಣ್ಣು ಎಸೆಯುವ ನೆಪದಲ್ಲಿ ನೀನು ನೇರವಾಗಿ ನನಗೇ ಹೊಡೆದೆಯಲ್ಲಾ.. ಆಗ.

ಮಾರನೇ ದಿನವೇ ನನ್ನ ನಿನ್ನ ಮೊದಲ ಜಗಳ ಪ್ರಾರಂಭವಾಗಿತ್ತು.. ನಾನು ನಿನಗೆ 'ಅಮ್ಮನ ಬಾಲ' ಅಂತ ರೇಗಿಸಲು ಪ್ರಾರಂಭಿಸಿದಾಗ ನೀನು ಮುಖದೊಡ್ಡದು ಮಾಡಿಕೊಂಡು ಡ್ರೈವರ್ ಸೀಟಿನ ಪಕ್ಕದ ಸೀಟಿನಲ್ಲಿ ಹೋಗಿ ಕುಳಿತುಬಿಟ್ಟೇ.. ನಾನು ಹಿಂದಿನ ಬಾಗಲಲ್ಲೇ ಜೋತು ಬಿದ್ದಿದ್ದೆ.. ನನಗೆ ಗೊತ್ತು.. ಅದು ನಿನ್ನ ಗುಣ ಅಲ್ಲ ಅಂತ.. ದಿನವೂ ನನಗಾಗಿ ಸೀಟು ಹಿಡಿದಿಡುತ್ತಿದ್ದ ನೀನು, ಯಾರೇನೇ ಅಂದರೂ ತಲೆಕೆಡಿಸಿಕೊಳ್ಳದೆ ಸದಾ ವಟಗುಡುತ್ತಾ ತಲೆತಿನ್ನುವ ನೀನು ನನ್ನ ಕಾಡಬೇಕೆಂದೇ ಹಾಗೆ ಮಾಡಿದೆಯಲ್ಲಾ.. ಯಾಕೋ ಪ್ರಾರಂಭದಲ್ಲಿ ನಾನ್ಯಾಕ ಮಾತಾಡಿಸಲಿ ಎಂಬ ಅಪ್ರಬುದ್ಧ ಪ್ರೇಮದ ಹಟ ಮನಸ್ಸಿಗೆ ಬಂದು ನಾನೂ ಸುಮ್ಮನಿದ್ದೆ.. ಆ ಎರಡು ದಿನಗಳಲ್ಲಿ ಮಾತು ಕತೆಯೇ ಇರಲಿಲ್ಲ..

ಗೆಳತೀ.. ಪ್ರ್ಈತಿಯಲ್ಲಿ ಮೌನ ಮಾತಾಡುತ್ತದೆ ಅನ್ನೋದು ನಿಜ ಅನಿಸಿದ್ದು ಆ ಎರಡು ದಿನ... ನಿತ್ಯವೂ ಅವಧಾನೀ ಮಾಸ್ತರರ ಕನ್ನಡ ಕ್ಲಾಸಿಗೆ ಬಂಕ್ ಹೊಡೆಯುತ್ತಿದ್ದ 'ನಾವು' ಅಂದು ಕೇವಲ 'ನಾನಾ'ದಾಗ ನನಗೆ ಸ್ವಲ್ಪ ಕಷ್ಟ ಅನಿಸಿತ್ತು.. ನಿನಗೂ ಹಾಗೇ ಅನಿಸಿರಬೇಕು.. ಜೊತೆಗೆ ಅವರ ಪಾಠ ಕೇಳಲು ಕೂಡಾ..!! ನನಗೆ ಆ ದಿನಗಳಲ್ಲಿ ಹೆಚ್ಚು ಕೇಳಿಸುತ್ತಿದ್ದುದು ನೀನು ತೇರಿಗೆ ಹೋದಾಗ ತಂದ ಬಿಳೀ ಬಣ್ಣದ ಕಿವಿಯೋಲೆಗಳ ಸದ್ದು.. ನಿನ್ನ ಬೆಳ್ಳಿ ಗೆಜ್ಜೆಯ ಝಣ ಝಣ ಸದ್ದು ಮಾತ್ರ.. ಆದರೆ ಅವೇ ಎಲ್ಲಾ ಮಾತಾಡಿದ್ದವು.. ನಾವು ಮತ್ತೆ ಮೊದಲಿನಂತೆ ಮಾತು ಪ್ರಾರಂಭಿಸಿದಾಗಲೂ ನಮ್ಮಿಬ್ಬರಲ್ಲಿ ಹೇಳಿಕೊಳ್ಳಲು ಹೊಸವಿಷಯವೇನೂ ಇರಲಿಲ್ಲ.. ಮಾತಾಡದ ದಿನಗಳಲ್ಲಿ ವಿಶೇಷವೇನೂ ನಡೆದೇ ಇರಲಿಲ್ಲವೆಂಬಂತೆ ಮಾತು ಪ್ರಾರಂಭಿಸಿದ್ದೆವು.. ಅಂದರೆ ಆ ಎರಡೂ ದಿನ ನನ್ನೊಳಗೆ ನೀನು, ನಿನ್ನೊಳಗೆ ನಾನು ಮಾತಾಡಿಕೊಂಡಿದ್ದೆವಲ್ಲವೇನೇ..?
ಅಲ್ಲ! ಆ ದಿನ ನಾನು ನಿಮ್ಮನೆಗೆ ಬಂದಾಗ ಯಾಕೇ ಹೊರಗೇ ಬರಲಿಲ್ಲ ನೀನು..? ನಿನ್ನ 'ನೋಟ್ಸ್' ಬೇಕಾಗಿತ್ತು ಅಂತ ನಿಮ್ಮಮ್ಮನ ಜೊತೆ ಹೇಳಿದ್ದೇನೋ ನಿಜ. ಆದರೆ ನಿನಗೆ ಗೊತ್ತಿತ್ತು.. ನನಗೆ ಬೇಕಾಗಿದ್ದು ನಿನ್ನ 'ನೋಟ' ಎಂದು.. ಅದಕ್ಕೇ ಬರಲಿಲ್ಲಾ ಅಲ್ಲಾ? ನಿಮ್ಮಮ್ಮನೋ ಯಾರ್ಯಾರದ್ದೋ ಮನೆ ಸುದ್ದಿನೆಲ್ಲಾ ನನಗೆ ಹೇಳತೊಡಗಿದ್ದಳು.. ಶಾಂತ ರೀತಿಯಲ್ಲಿ ಅದನ್ನೆಲ್ಲಾ ಸಹಿಸಿಕೊಂಡೆ.. ಆದರೆ ನೀನು ಮಾಡಿದ್ದು ಅಂತ ನನಗೆ ಬೆಳಗ್ಗೆ ಕಲಸಿದ ಅವಲಕ್ಕಿ ಕೊಟ್ರಲ್ಲ.. ತಿಂದೆ ನೋಡು.. ನೀನು ಮಾಡಿದ್ದು ಅಂತಾ.. ಅದು ಚೆನ್ನಾಗಿರ್ಲಿಲ್ವೇ.. ಪ್ಲೀಸ್ ಮುಂದೆಂದೂ ನನಗೆ ಅವಲಕ್ಕಿ ಮಾತ್ರ ಮಾಡಿಕೊಡಬೇಡ..
ತಿಂಗಳುಗಳು ಕಳೆದರೂ ನಮಗೆ ದಿನವೂ ಹೊಸದಿತ್ತಲ್ಲಾ..? ಅದೊಂದು ರಾತ್ರಿ ನಕ್ಷತ್ರ ಎಣಿಸುತ್ತಾ, ಆಕಾಶದಲ್ಲಿ ಚಿತ್ತಾರ ಮೂಡಿಸುತ್ತಾ ನಾವಿಬ್ಬರೂ ಲಾಂಗ್ ವಾಕ್ ಅಂತ ಹೋಗಿದ್ವಿ.. ಅದೇ ನೀನು ಬಿಳೀ ಬಣ್ಣದ ಲಂಗದಲ್ಲಿ ಬಂದಿದ್ದೆಯಲ್ಲಾ.. ನಾನು ಅದೇ ಹವಾಯಿ ಚಪ್ಪಲಿಯಲ್ಲಿ.. ಅದಕ್ಕೇ ಅಲ್ವೇ ನಿನ್ನಿಂದ ಬೈಸಿಕೊಂಡಿದ್ದು.. 'ಟೇಸ್ ಇಲ್ಲಾ' ಅಂತ.. ಟೇಸ್ಟ್ ಇದ್ದುದ್ದಕ್ಕೇ ನಿನ್ನನ್ನು ಹುಡೂಕಿದ್ದು ಹುಡುಗೀ... ಕತ್ತಲೆಯ ಕರೀ ಆಕಾಶದಲ್ಲಿನ ಮಿನುಗು ನಕ್ಷತ್ರಗಳಿಗಿಂತ ಬಿಳೀ ಮುಖದಲ್ಲಿನ ನಿನ್ನ ಕಣ್ಣುಗಳಿಗೇ ಹೆಚ್ಚು ಹೊಳಪಿತ್ತು. ಮಾತಾಡ್ತಾ ಮಾತಾಡ್ತಾ ನಿನ್ನ ಕೈ ಹಿಡಿದುಬಿಟ್ಟೆ.. ನೀನೇಕೆ ಹಾಗೆ ಗುರಾಯಿಸಿದ್ದು..? ರಸ್ತೆಯಲ್ಲಿ ಯಾವುದೋ ವಾಹನವೊಂದು ಬಂದು ನಮ್ಮ ಮೇಲೆ ಬೆಳಕು ಚೆಲ್ಲದಿದ್ದರೆ, ನಾ ನಿನ್ನ ಕೈಬಿಡದಿದ್ದರೆ ನೀನು ಹೊಡೆದೇ ಬಿಡುತ್ತಿದ್ದೆಯೋ ಏನೋ? ಸ್ವಲ್ಪ ದೂರದವರೆಗೂ ಮೌನ ಕತ್ತಲೆಯಷ್ಟೇ ಗಂಭೀರವಾಗಿತ್ತು.. ನಿಮ್ಮನೆ ಕಡೆ ತಿರುಗುವಾಗ ನೀನು ಕಣ್ಣಲ್ಲೇ 'ಪುಕ್ಕಲ' ಎಂಬಂತೆ ನನ್ನ ನೋಡಿ, ಕೆನ್ನೆ ಸವರಿ ಹೋಗುವಾಗ ಸಮಾಧಾನಟ್ವಾಯಿತು.. ಆದರೆ ಧೈರ್ಯ ಬರಲಿಲ್ಲ..

ಭಾನುವಾರವೂ ಸ್ಪೆಶಲ್ ಕ್ಲಾಸಿದೆ ಅಣ್ತ ಮನೆಯಿಂದ ಬಂದು ನಾವಿಬ್ಬರೂ ಅಪ್ಸರಕೊಂಡಕ್ಕೆ ಹೋಗಿದ್ದೆವಲ್ಲಾ.. ಬೆಳಗ್ಗೆಯಿಂದ ಸಂಜೆಯವರೆಗೂ ಬಂಡೇ ಮೇಲೆ, ಮರಳಿನಲ್ಲಿ ಕಾಲು ಚಾಚಿ, ಮತ್ತೆ ಬಂಡೆ ಮೇಲೆ ಸಮುದ್ರಮುಖಿಗಳಾಗಿ ಸುಮ್ಮನೆ ಕುಳಿತೇ ಇದ್ದೆವು.. ಸುಮ್ಮನೆ ನೀನು ನನ್ನ ಹೆಸರನ್ನು ಆಗಾಗ ಕರೆಯುತ್ತಿದ್ದೆ.. ಮತ್ತೆ ಪುನಃ ಮೌನ.. ಆ ಮೌನ ಅದೆಷ್ಟು ಸುಂದರ ... ಯಾವ ವಿಚಾರವನ್ನೂ 'ಹೀಗೆ ಇದು' ಅಂತ ಹೇಳದೆ ಎಲ್ಲಾ ವಿಷಯವನ್ನು ಹೇಳುತ್ತಾ, ಮನಸ್ಸಿಗೆ ಬೇಕಾದದ್ದನ್ನು ಅಂದುಕೊಳ್ಳಲು ಎಡೆಮಾಡಿಕೊಡುವ ಸುಮಧುರ ಭಾವ.. ಅದೇ ಮೌನದಲ್ಲಿ ಸಂಜೆಯಾಗಿತ್ತು..

ಸೂರ್ಯ ಕೆಂಪಗಾಗುತ್ತಿರುವ ನಿನ್ನ ಕಣ್ಣಲ್ಲಿ ನೀರು ಕಂಡಂತಾದರೂ, ಒಪ್ಪಿಕೊಳ್ಳಲು ಮನಸಾಗಲಿಲ್ಲ.. ಅದು ನನಗೆ ಸಮುದ್ರಕ್ಕೆ ಸವಾಲೆಸೆದು ಕಣ್ಣಲ್ಲೇ ನುಂಗಿದ ನಿನ್ನ ಕಣ್ಣಿನ ನೀರಂತೆಯೂ, ಮುಳುಗುವ ಸೂರ್ಯನ ನೋಡಿ ಮುಂಬರುವ ಕತ್ತಲೆಯ ಭಯದ ಕಣ್ಣೀರಂತೆಯೂ, ಕಡಲ್ಗಾಳಿ ತಂದ ಉಸುಕಿನ ಕಣಗಳು ಕಣ್ಣೀಗೆ ಬಿದ್ದು ಬಂದ ನೀರಂತೆಯೂ ಕಾಣಿಸಿತ್ತು... ಕಾರಣ ಕೇಳಲು ಮನಸಾಗಲಿಲ್ಲ.. ಆ ಸುಂದರ ಮೌನವನ್ನು ನಾ ಪ್ರೀತಿಸುತ್ತೇನೆ ಗೆಳತೀ.. ಅದನ್ನು ಹಾಳುಮಾಡಲು ಇಷ್ಟವಿರಲಿಲ್ಲ.. ಒಮ್ಮೆಗೇ ಹತ್ತಿರ ಬಂದು ಗಟ್ಟಿಯಾಗಿ ಅಪ್ಪಿಕೊಂಡು 'ನೀನಂಗೆ ಬೇಕು' ಅಂತ ಅತ್ತಾಗ ಏನು ಮಾಡಬೇಕೆಂಬುದೇ ಅರ್ಥವಾಗಲಿಲ್ಲ.. ಸುಮ್ಮನೇ ಇದ್ದೆ.. ಅಂತಹ ಮೌನವನ್ನು ನಾನು ಪ್ರೀತಿಸುತ್ತೇನೆ ಗೆಳತೀ...

ಅಪ್ಸರಕೊಂಡಕ್ಕೆ ಹೊರಡುವಾಗಲೇ ಹೇಳಿದ್ದೆ.. ನೀರು ಬಾಟಲಿ ತರಬೇಕು ಅಂತ.. ಸುಮ್ಮನೆ ಅಪ್ಸರೆಯಂತೆ ರೆಡಿಯಾಗಿ ಬಂದು ಬಿಟ್ಟೆಯಲ್ಲಾ ನೀನು.. ಅದಕ್ಕೇ ನಿನ್ನನ್ನು 'ಸು' ಎಂದು ಕರೆಯುವುದು ನಾನು.. ಆ ಸುಡು ಬಿಸಿಲಿನಲ್ಲಿ ಯಾರದ್ದೋ ಮನೆಬಾಗಿಲಲ್ಲಿ ನಿಂತು ತಂದ ನೀರನ್ನೂ , ಕಾಮತ ಹೋಟಲಿನ ಇಡ್ಲಿಯನ್ನೂ ಮರಳಿ ಬರುವಾಗ ಟೆಂಪೋದಲ್ಲಿ ನೀನು ವಾಂತಿ ಮಾಡಿಕೊಳ್ಳುತ್ತಿರುವಾಗ ನೀರು ತರಲು ಪಟ್ಟ ಕಷ್ಟಗಳೆಲ್ಲಾ ವ್ಯರ್ಥ ಅನಿಸಿತು.. ಎಲ್ಲಾ ಜನ ಮೊದಲ ಬಾರಿಗೆ ವಾಂತಿ ಮಾಡಿದೊಬ್ಬರನ್ನು ನೋಡುತ್ತಿರುವಂತೆ ನಮ್ಮನ್ನು ನೋಡುತ್ತಿರುವಾಗ 'ನಾನೇನು ಮಾಡ್ಲಿಲ್ಲ' ಅಂದು ಬಿಟ್ಟೆ.. ಆಗ ನೀ ಮತ್ತೆ ಅದೇ ತರ ಗುರಾಯಿಸಿದೆ.. ನನಗರ್ಥವಾಗಿ ಬಾಯಿ ಮುಚ್ಕೊಂಡೆ..

ಚಳಿಗಾಲದ ಆರಂಭದ ದಿನಗಳಲ್ಲಿ ನೀನು ಹೇಳಿದೆ ಅಂತ ನಾನೊಂದು ಉದ್ದ ಕೈಯಿರುವ ಸ್ವೆಟರಿನಂತಹ ನೀಲಿ ಬಣ್ಣದ ಅಂಗಿ ಕೊಂಡಿದ್ದೆನಲ್ಲ.. ಅದರಲ್ಲಿ ನೀನು ಕಸೂತಿ ಮಾಡ್ತೀನಿ ಅಂತ ತೆಗೆದುಕೊಂಡು ಹೋಗಿ ತೂತು ಮಾಡಿ ತಂದು ಕೊಟ್ಟೆಯಲ್ಲಾ.. ಅದು ಹಾಗೇ ಇದೆ... ಅಂಗಿಯೂ ರಂಧ್ರವೂ.. ನಾನೇ ಅದನ್ನು ತೊಳೆಯುತ್ತೇನೆ.. ದಿನವೂ ಹಾಕಿಕೊಂಡೇ ಮಲಗುತ್ತೇನೆ.. ಚಳಿಗಾಳಿ ರಂಧ್ರದಲ್ಲಿ ತೂರಿಬಂದು ನನ್ನ ಎದೆಯನ್ನು ಪ್ರತಿದಿನವೂ ಕೊರೆಯುತ್ತದೆ.. ಆಗೆಲ್ಲಾ ನಿನ್ನ ನೆನಪಾಗಿ ಸ್ವಲ್ಪ ಬೆಚ್ಚಗಾಗುತ್ತೇನಷ್ಟೇ...

ನೋಡು ಅದಾಗಲೇ ಒಂದು ವರ್ಷ ಕಳೆದಿದೆ.. ನಭೋಮಂದಲದಲ್ಲಿ ಗ್ರಹಗಳು ದಿಕ್ಕು ಬದಲಿಸುವ ಸಂಕ್ರಾಂತಿಯಂದು ನನ್ನ ದಿಕ್ಕು ಬದಲಿಸಿದ ನೀನು ಇಂದು ಇಲ್ಲಿಗೆ ತಂದು ನಿಲ್ಲಿಸಿರುವೆ.. ಈ ವರ್ಷವೂ ನೀನು ತರುವ ಹೊಸ ಎಳ್ಳು ಬೆಲ್ಲಕ್ಕಾಗಿ, ನಿನ್ನ ತೇರಿನ ಕಿವಿಯೋಲೆಗಳ ಸದ್ದಿಗಾಗಿ, ನೀನು ಹೊಸರೀತಿಯಲ್ಲಿ ಕಲಸುವ ಅದೇ ಅವಲಕ್ಕಿಗಾಗಿ, ಹೊಸ ಅಂಗಿಯೊಂದರಲ್ಲಿ ಮಾಡುವ ತಂಪಿನ ರಂಧ್ರಕ್ಕಾಗಿ, ಅಪ್ಸರಕೊಂಡದ ಆ ಅಪ್ಸರೆಗಾಗಿ ಕಾಯುತ್ತಿರುವ


ನಿನ್ನ
ಕಾಯ...