Sunday, November 16, 2008

ಬಸ್ಸಿನಲ್ಲಿ ಸೀಟು ಸಿಕ್ಕಾಗ......

ನಮ್ಕಡೆ ಹಾಗೆನೇ.ಡ್ರೈವರ್ಗಳು ಬಸ್ ನಿಲ್ಸೋದು ಬಸ್ ಸ್ಟಾಂಡ್ಗಿಂತ ಹತ್ತು ಮೀಟರ್ ಮೊದಲು ಅಥವಾ ಹತ್ತು ಮೀಟರ್ ದೂರದಲ್ಲಿ. ಉದ್ಧೇಶವೇನೆಂದರೆ ಬಸ್ ಸದಾ ರಷ್ ಆಗಿರುವುದರಿಂದ ಜನ ಹತ್ತುವವರು ಕಡಿಮೆ ಆಗಲಿ ಎಂದು.ಬಸ್ ಸ್ಟಾಂಡ್ನಿಂದ ಓಡಿ ಬರುವಷ್ಟರಲ್ಲಿ ಬಸ್ ಹೊರಟಿರುತ್ತದೆ.ಇದರಿಂದ ಮುದುಕರನ್ನು ಹಾಗೂ ಹೆಂಗಸರನ್ನು ತಡೆಯಬಹುದೇ ಹೊರತು ಕಾಲೇಜಿಗೆ ಹೋಗುವ ನಮ್ಮಂತವರನ್ನಲ್ಲ..ನಾವು ಮೊದಲೇ ಸಿದ್ಧವಾಗಿರುತ್ತಿದ್ದೆವು.ಹೀಗಾಗಿ ಆವತ್ತು ಓಡಿ ಹೋಗಿ ಬಸ್ಸನ್ನು ಹಿಡಿದು ಒಂದು ಕಾಲನ್ನು ಬಾಗಿಲಿಲ್ಲದ ಬಸ್ಸಿನ ಮೆಟ್ಟಿಲಿನ ಮೇಲಿಡಲು ಸಫಲನಾದೆ.

ಭಾರತದ ಜನಸಂಖ್ಯಾಸಮಸ್ಯೆ ನಿಜವಾಗಿ ಅರಿವಿಗೆ ಬಂದಿದ್ದು ಆಗಲೇ.ಎಲ್ಲಿಂದ ಬರ್ತಾರೋ ಎಲ್ಲಿಗೆ ಹೋಗ್ತಾರೋ..ಇಲ್ರೀ ಬಸ್ಸಿನ ಬಾಗಿಲ ಮೇಲೆ ಇದನ್ನೆಲ್ಲ ಆಲೋಚನೆ ಮಾಡಕಾಗ್ತಾ ಇಲ್ಲ..ನಾನೀಗ ಒಂದು ಕಾಲಿನ ಮೇಲೆ ಬ್ಯಾಲೆನ್ಸ್ ಮಾಡಲು ಪ್ರತ್ನ ಮಾಡುವುದರ ಜೊತೆಗೆ ಜನ ವ್ಯೂಹವನ್ನು ಬೇಧಿಸಿ ಒಳ ಪ್ರವೇಶ ಮಾಡಬೇಕಾಗಿದೆ.ಬಸ್ಸು ಘಟ್ಟದಲ್ಲಿ ನಿಧಾನವಾಗಿ ಹೋಗುತ್ತಿತ್ತು. ಇದೇ ಸಮಯದಲ್ಲಿ ಆ ಕಂಡಕ್ಟರ್ ಕೂಡಾ ಮುಂದಿನ ಬಾಗಿಲಿನಿಂದ ಇಳಿದು ಹಿಂದಿನ ಬಾಗಿಲಿನಲ್ಲಿ ನನ್ನನ್ನು ದೂಡಿಕೊಂಡು ಹತ್ತೇ ಬಿಟ್ಟ.ಸಾಮಾನ್ಯವಾಗಿ ಬಸ್ ರಷ್ ಆದರೆ ಕಂಡಕ್ಟರ್ ಆಗಿರುವವರಿಗೆ ಇದೇ ಸಮಸ್ಯೆ.ಆಕಡೆ ಒಮ್ಮೆ ..ಈಕಡೆ ಒಮ್ಮೆ ..ಹೀಗಾಗಿ ಮಧ್ಯದಲ್ಲಿ ಇರುವವರಿಗೆ ಟಿಕೆಟ್ ಸಿಗುವ ಸಂಭವನೀಯತೆ ಬಹಳ ಕಡಿಮೆ..ಇದನ್ನೇ ಬಂಡವಾಳವಾಗಿರಿಸಿಕೊಂಡಿರುವ ಕೆಲ ಭಂಡರು ಕಂಡಕ್ಟರ್ ಬರುವ ಮೊದಲೇ ಮಧ್ಯ ನುಸುಳಿಕೊಳ್ಳಲು ಹೊಂಚು ಹಾಕುತ್ತಿರುತ್ತಾರೆ....

ಅಂತೂ ಇಂತೂ ಒಳ ಬಂದೆ.ಆದ್ರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಮೇಲೆ ದಬ್ಬಿದ ಕಂಡಕ್ಟ್ರಿಗೆ ಧನ್ಯವಾದ ಸಮರ್ಪಿಸಲು ಮನಸ್ಸೇ ಬರುತ್ತಿಲ್ಲ.ಅಲ್ಲೇ ಎಷ್ಟೋ ವಾಸಿ...ಉಸಿರಾಡಲು ಆಮ್ಲಜನಕದ ಪೂರೈಕೆಯಾದರೂ ಇತ್ತು.ಸೃಷ್ಠಿಯ ಎಲ್ಲಾ ಕಡೆ ಕಾಣಸಿಗುವ ಪಂಚಭೂತಗಳಲ್ಲಿ ಕೇವಲ ಸೆಕೆಯ ಉರಿಬೆಂಕಿ..ಜನರ ಶಬ್ದ...ಸುರಿಯುತ್ತಿದ್ದ ಬೆವರಿನ ನೀರು..ಬಿಟ್ಟರೆ ಉಸಿರಾಟದ ಗಾಳಿ ಹಾಗೂ ನಿಲ್ಲಲು ಜಾಗದ ಸುಳಿವೂ ಇರಲಿಲ್ಲ.... ಅಪ್ಪ ಹೇಳುತ್ತಿದ್ದರು.."ಸ್ವಂತ ಕಾಲಮೇಲೆ ನಿಲ್ಲಬೇಕು..ಸ್ವಸಾಮರ್ಥ್ಯದಿಂದ ಮೇಲೆ ಬರಬೇಕು..." ಎರಡನೆಯದಂತೂ ಆಗಲಿಲ್ಲ..ಕಂಡಕ್ಟರ್ ದೂಡಿದಾಗ ಮೇಲೆ ಬಂದವ ನಾನು..ಆದರೆ ಇಲ್ಲಿ ನೋಡಿದರೆ ಸ್ವಂತಕಾಲ ಮೇಲೆ ನಿಲ್ಲಲೂ ಸಾಧ್ಯವಿಲ್ಲ ಎಂದು ಕಾಣುತ್ತದೆ...

ನಾನು ಆಶಾವಾದಿ..ಇಂತ ರಷ್ನಲ್ಲೂ ಸೀಟು ಸಿಗುತ್ತೆ ಎಂದೇ ಭಾವಿಸುತ್ತೇನೆ.ನಿಜ ಮುಂದಿನ ಸ್ಟಾಪ್ನಲ್ಲಿ ಇಳಿಯುವವರೊಬ್ಬರಿದ್ದರು.ನನ್ನ ಪರಿಚಯದವರೆ..ಹೀಗಾಗಿ ನನಗೆ ಗೊತ್ತು ಅವರು ಮುಂದಿನ ಸ್ಟಾಪ್ನಲ್ಲಿ ಇಳಿಯುತ್ತಾರೆ ಎಂದು..ಈ ಸಂದರ್ಭದಲ್ಲಿ ದೇವರಿಗೆ ನನ್ನ ಕೋರಿಕೆಯೇನೆಂದರೆ ಇನ್ಯಾರಿಗೂ ಈ ವಿಷಯದ ಬಗ್ಗೆ ತಿಳಿಯದಿರಲಿ ಎಂದು..ಮತ್ತು ನನ್ನ ಮುಂದಿನ ಗುರಿ ಆ ಸೀಟು...ಹೀಗೆ ಹಾಗೆ ಮಾಡಿಕೊಂಡು ಹೇಗೋ ಅವರು ಏಳುವ ಸಮಯಕ್ಕೆ ಸರಿಯಾಗಿ ಸೀಟಿನ ಹತ್ತಿರ ನಾ ತಲುಪಿದೆ.. ಅವರು ಏಳುವುದೇ ತಡ ಬಸ್ಸಿನ ಜನ ನನ್ನ ಕಡೆ ಪ್ಲಾಸ್ಟಿಕ್ ಕವರ್ ಗಳನ್ನೂ.. ಕರ್ಚೀಫ್ ಗಳನ್ನೂ..ಎಸೆಯತೊಡಗಿದರು..ಇದೇನಪ್ಪಾ ರಾಜಕಾರಣಿಗಳು ಓಟು ಹಾಕಿದ ಜನರನ್ನು ಮರೆತು ಸೀಟಿಗಾಗಿ ಓಡುತ್ತಿರುವಾಗ ಹಿಂದಿನಿಂದ ರೊಚ್ಚಿಗೆದ್ದ ಜನ ಕಲ್ಲೆಸೆಯುವಂತೆ..ನನಗೆ ಯಾಕ್ ಹೀಗೆ ಮಾಡ್ತಿದಾರೆ ಎಂದು ಯೋಚಿಸುವಷ್ಟರಲ್ಲೇ ನನ್ನ ಕಾಲ ಮೇಲೇ ಯಾರೋ ಒಬ್ಬ ಬಂದು ಕುಳಿತಿದ್ದೂ ಆಯಿತು.."ಏಳ್ರೀ ಮೇಲೆ... ಅಯ್ಯೋ ನನ್ನ ಕಾಲು.." ಕಿರುಚಿಕೊಂಡೆ.ಎಲ್ಲರೂ ನನ್ನನ್ನು ದುರುಗುಟ್ಟಿ ನೋಡುತ್ತಿದ್ದರು ಏನೋ ತಪ್ಪು ಮಾಡಿದಂತೆ..ಆದರೆ ಒಬ್ಬಳನ್ನು ಬಿಟ್ಟು ..ನನ್ನ ಪಕ್ಕದಲ್ಲೇ ಇದ್ದಳು...
ಯಾರಂತ ನನಗೆ ಗೊತ್ತಿಲ್ಲ...ಯಾರಂತ ನನಗೇ ಗೊತ್ತಿಲ್ಲ..ದಿನಾ ಕಾಲೇಜಿಗೆ ತಪ್ಪದೇ ಹೋಗುತ್ತೇನೆ ಆದರೂ ಇವಳು ನನ್ನ ಕಣ್ಣಿಗೆ ಬಿದ್ದಿಲ್ಲವಲ್ಲ.. ಯಾರಿರಬಹುದು...ಮಾತಾಡಿಸಲಾ .."ಪ್ಲೀಸ್ ಮಗು ಹಿಡ್ಕೊಳ್ರೀ....ತುಂಬಾ ರಷ್ ಇದೆ...ನಿಲ್ಲಕಾಗ್ತಾ ಇಲ್ಲ.. ಹೊನ್ನಾವರದವರೆಗೆ ಮಾತ್ರ..." ಹೆಂಗಸೊಬ್ಬಳ ದನಿ. "ನೋ ಪ್ರಾಬ್ಲಮ್.." ಮಗುವನ್ನು ತೊಡೆ ಮೇಲೆ ಕೂರಿಸಿಕೊಂಡೆ..ನಿಜ ಹೇಳ್ಬೇಕು ಅಂದ್ರೆ ಅವರಿಗೆ ಸಹಾಯ ಮಾಡುವುದಕ್ಕಿಂತ ಪಕ್ಕದಲ್ಲಿದ್ದವರ ಇಂಪ್ರೆಶನ್ ಪಡೆಯುವದೇ ಮುಖ್ಯವಾಗಿತ್ತು..ಇಲ್ಲದಿದ್ದರೆ "ನೋ ಪ್ರಾಬ್ಲಮ್.." ಎಂದು ನಮ್ಮ ಹಳ್ಳಿಯಲ್ಲೇಕೆ ಇಂಗ್ಲಿಷ್ ಪ್ರಯೋಗಿಸಬೇಕಿತ್ತು ಹೇಳಿ...ಇದೆಲ್ಲಾ ವಯಸ್ಸಿಗೆ ಸಹಜವಾಗಿ ತನ್ನಿಂದ ತಾನೆ ಬಂದುಬಿಡುತ್ತವೆ.. ಏನಂತೀರಾ?...

ಮಗು ಸುಂದರವಾಗಿಯೆು ಇತ್ತು....ಮೂರು ವರ್ಷವಿರಬೇಕು..ಆದರೆ ಪಕ್ಕದಲ್ಲಿದ್ದವಳು ನನ್ನದೇ ವಯಸ್ಸಿನವಳು.ಅವಳ ಮುಖ ಸರಿಯಾಗಿ ಕಾಣ್ತಾ ಇಲ್ಲಾರೀ..ಆ ಕೆಟ್ಟ ಕಿಡಕಿಯ ಕಡೆ ಮುಖ ಮಾಡಿ ಏನ್ ನೋಡ್ತಾ ಇದಾಳೋ ಏನೋ..ಒಮ್ಮೆ ತಿರುಗಬಾರದೇ..ಇರಲಿ ಹೊನ್ನಾವರ ತಲುಪುವ ವರೆಗೆ ಒಮ್ಮೆಯಾದರೂ ತಿರುಗೇ ತಿರುಗುತ್ತಾಳೇ..ಅಲ್ಲಿ ಬಸ್ಸಿನಿಂದ ಕೆಳಗಿಳಿಯಲೇ ಬೇಕು ತಾನೆ?..ಬಸ್ಸು ಇನ್ನೊಂದು ಘಟ್ಟದ ಆರಂಭದಲ್ಲಿತ್ತು..ಹೊರಗಡೆ ಬೋರ್ಡ್ ನೋಡಿದೆ 'ಹೊನ್ನಾವರ 3 ಕಿ.ಮೀ'.

ಇದ್ದಕ್ಕಿದ್ದಂತೆ ಕಿರುಚತೊಡಗಿತು.....ಮಗು ಅಳದೆ ಇನ್ನೇನ್ ಮಾಡುತ್ತೆ?..ಪಾಪ ಇಷ್ಟೊಂದು ಜನರನ್ನು ಮೊದಲ ಬಾರಿಗೆ ನೋಡಿರಬೇಕು..ಪಕ್ಕದಲ್ಲಿ ಅಮ್ಮನೂ ಇಲ್ಲ..ನಾನಾದರೋ ಪಕ್ಕದಲ್ಲಿದ್ದವರಿಗೆ ಹೆಚ್ಚು ಗಮನ ಕೊಡುತ್ತಿದ್ದೇನೆ.. ಮಗು ಅಳದೆ ಇನ್ನೇನ್ ಮಾಡುತ್ತೆ?..ಈಗ ಈ ರಷ್ನಲ್ಲಿ ಎಳೆ ಮಗುವಿನ ಸಮೇತ ಹತ್ತಿ ಕುಳಿತಿದ್ದವರೊಬ್ಬರಿಗೆ ಹಸ್ತಾಂತರಿಸಿದ ಆ ಮಹಾತಾಯಿಯ ಅನ್ವೇಷಣೆಯಲ್ಲಿದ್ದಾನೆ.. ಈ ಆಂಜನೇಯ..ಇಲ್ಲ ಕಾಣ್ತಾ ಇಲ್ಲ....ಆಗಲೇ ಅವಳು ಮುಖ ಈ ಕಡೆ ತಿರುಗಿಸಿದಳು..

ಇದ್ದಕ್ಕಿದ್ದಂತೆ ಸುಮ್ಮನಾಯಿತು...ಮಗು ಸುಮ್ಮನಾಗದೆ ಇನ್ನೇನ್ ಮಾಡುತ್ತೆ?..ಅಂಥ ಸುಂದರ ಮುಖವನ್ನು ಮೊದಲ ಬಾರಿಗೆ ನೋಡಿರಬೇಕು..ಮಗುವೇನು ನಾನು ನೋಡಿರುವುದು ಇದೇ ಮೊದಲು..ಈಗ ಮೊದಲ ಬಾರಿಗೆ ಜೋಗ್ ಜಲಪಾತ ನೋಡಿದಾಗಲೂ ಹೀಗೇ.. ಮಾತೇ ಹೊರಡುವುದಿಲ್ಲ...ಯಾರ್ರೀ ಅವಳು..? ನಮ್ಮೂರಿನಲ್ಲಿ..ಅದೂ ನಂಗೆ ಗೊತ್ತಿಲ್ಲದೆ...ಛಾನ್ಸೇ ಇಲ್ಲ ನಮ್ಮೂರಿನವಳಲ್ಲ ಇವಳು.....ಯೋಚಿಸ್ತಾ ಇದ್ದೆ.ಒಮ್ಮೆ ಅಷ್ಟೇ..ಮತ್ತೆ ಅದೇ ಕಿಡಕಿ ನೋಡುತ್ತಾ ನನ್ನನ್ನು ಜೋಗದ ಗುಂಡಿಯಲ್ಲಿ ನೂಕಿದಳು..ನಾನು ಬಹಳ ಒಳ್ಳೆಯವನ್ರೀ..ಮಗುವನ್ನು ಚಿವುಟಿ ಮತ್ತೆ ಈ ಕಡೆ ತಿರುಗುವಂತೆ ಮಾಡಲಿಲ್ಲ...ಈಗ ಸ್ಪಷ್ಟವಾಗಿ ಕಾಣುತ್ತಿದ್ದ ಕಣ್ಣೇ ಸಾಕಾಗಿತ್ತು... ಮಾತಾಡಲು...
ಬಸ್ಸು ಹೋಗ್ತಾ ಇತ್ತು..ನಾನ್ ನೋಡ್ತಾ ಇದ್ದೆ..ಮಗು ಸುಮ್ಮನಿತ್ತು..ಕಾಲೇಜು ಬಂತು..ಅವಳು ಇಳಿದಳು.... "ನಿಲ್ಸ್ರೀ.. ನಾನೂ ಇಲ್ಲೇ ಇಳಿಯೋದು..." ಕೂಗ್ತಾ ಇದೀನಿ..ಬಸ್ಸು ಹೊರಟೇ ಬಿಡ್ತು..."ಬಸ್ ನಿಲ್ಸಿದಾಗ ಎಲ್ ನೋಡ್ತಾ ಇತರ್ಿಯಾ..?ಮುಂದಿನ ಸ್ಟಾಪ್ನಲ್ಲಿ ಇಳ್ಕೊ...." ಕಂಡಕ್ಟರ್ ದಬಾಯಿಸಿದ.ಬೇರೆಲ್ಲೋ ನೋಡ್ತಿದ್ದವ ನಾನೇ..ಹೀಗಾಗಿ ಸುಮ್ಮನಾದೆ.ಎಷ್ಟಂದರೂ ಮುಂದಿನ ಸ್ಟಾಪ್ ತಾನೇ..ಕಾಮತರ ಹೊಟೆಲ್ ಹಿಂದುಗಡೆಯಿಂದ ಕಾಲೇಜಿಗೆ ಹೋದರಾಯಿತು..ಅದ್ಸರಿ ಈ ಮಹಾತಾಯಿ ಎಲ್ಲಿ? ಹುಡುಕಿದೆ....ಏನಿದು..ಮಗುವನ್ನು ಬಿಟ್ಟೂ ಇಳಿದುಬಿಟ್ಟಳಾ ಹೇಗೆ..ನನಗೆ ಮರೆತೇ ಹೋಗಿತ್ತು...ಕಂಡಕ್ಟರ್ಗೆ ಹೇಳಿದೆ..ಅವನಂದ ಅವಳು 'ಕವಲಕ್ಕಿ'ಯಲ್ಲೇ ಇಳಿದಳು ಎಂದು..

ಅಯ್ಯುಯ್ಯೋ ಇದೇನು ಗ್ರಹಚಾರ...ಯಾರದ್ದೀ ಮಗು..ನನ್ನ ಕೈಲೇಕೆ ಬಿಟ್ಟು ಇಳಿದಳು...ಈಗ ನಾನೇನ್ ಮಾಡ್ಲಿ...ಅಪ್ಪನಿಗೆ ಫೋನ್ ಮಾಡಿದೆ. "ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ......." ನೆನಪಾಯಿತು.. ಅಪ್ಪನ ಕಾಲೆಜಿನ ಸ್ಟಾಫ್ರೂಮಿನಲ್ಲಿ ನೆಟ್ವಕರ್್ ಇರುವುದಿಲ್ಲ..ಅಮ್ಮನ ಹತ್ತಿರ ಮೊಬೈಲ್ ಇಲ್ಲ...ಹಾಂ, ಹೈವೇ ಹೊಟೆಲ್ ಕಾಮತರೇ ಸರಿ..

ಹೋದೆ..ಕಾಮತರ ಮಗ ಇದ್ದ ಹೊಟೆಲಲ್ಲಿ..ಕೇಳ್ದ.."ಏನ್ ತಮಾ..ಇವತ್ತು ಕಾಲೇಜಿಲ್ವಾ..?"..ಅವನಿಗೆ ಕಥೆ ಹೇಳಿ ಅರ್ಥ ಮಾಡುವಷ್ಟರಲ್ಲಿ.. ಮಗು ಮತ್ತೆ ಅಳತೊಡಗಿತ್ತು...ಏನ್ ಮಾಡ್ಲಿ ಈಗ...ಕಾಮತರ ಮಗ ಖಂಜೂಸು..ನಾನೇ ಕೇಳ್ದೆ "ಮಗೂಗೆ ಹಸಿವಾಗಿದೆ ಅನಿಸ್ತಿದೆ..ಒಂದ್ ಪ್ಲೇಟ್ ಇಡ್ಲಿ ತರೋದಕ್ಕೇಳಿ.." ಆ ಸಮಯದಲ್ಲಿ ಮಗು ಇಡ್ಲಿ ತಿನ್ನುತ್ತೋ ಇಲ್ಲವೋ...ಆಲೋಚನೆ ಮಾಡಲೇ ಇಲ್ಲ.ಅವರ ಹೋಟ್ಲಲ್ಲಿ ತಿಂದರೆ ಜೀರ್ಣವಾಗುವ ಪದಾರ್ಥ ಅಂದರೆ ಇಡ್ಲಿಯೊಂದೇ...ಮಗು ಸ್ವಲ್ಪ ಹಾಲು ಕುಡಿಯಿತು ಅಷ್ಟೇ..ಇಡ್ಲಿಯನ್ನು ಕೈಯಲ್ಲಿ ಹಿಡಿದು ನೆಲಕ್ಕೆ ಬೀಳಿಸಿತು...ಈ ಕಾಮತರ ಮಗನಿಗೆ ನನ್ನ ಕಥೆ(ವ್ಯಥೆ)ಗಿಂತ ಇಡ್ಲಿ ಬಿದ್ದ ಜಾಗವನ್ನು ತೊಳೆಸುವುದೇ ಮುಖ್ಯವಾಗಿತ್ತು...
ಇದೇ ಒಳ್ಳೆ ಐಡಿಯಾ.. 'ಹೊನ್ನಾವರ ಆರಕ್ಷಕ ಠಾಣೆ' ಬೋರ್ಡ್ ನೋಡಿದಾಗ ಅನಿಸಿದ್ದು.ಆದರೆ ನಾನು ಪೋಲಿಸ್ ಸ್ಟೇಶನ್ಗಾ? ಏನ್ರೀ ತಪ್ಪು....ನಾನೇನು ತಪ್ಪು ಮಾಡಿ ಹೋಗುತ್ತಿಲ್ಲವಲ್ಲ? ಅಪ್ಪ-ಅಮ್ಮ ಏನೂ ಹೇಳುವುದಿಲ್ಲ ..ಆದ್ರೆ ಆಯಿದೇ ಭಯ..ಸಂಪ್ರದಾಯ..ಕರ್ತವ್ಯ-ಧರ್ಮ....ಮಡಿ....ಸ್ವಲ್ಪ ಜಾಸ್ತಿ ನೋಡಿ ಅದಕ್ಕೆ. ಹಾಗಂತ ಮಗೂನ ಮನೆಗೆ ಕರ್ಕೊಂಡ್ ಹೋದ್ರೆ ಸುಮ್ಮನಿರುತ್ತಾರೆ ಅಂತಲ್ಲ..ಇರ್ಲಿ.....ಏನ್ ಮಾಡಕ್ಕಾಗಲ್ಲ...ಒಳಗ್ ಹೋದೆ..
ಸಿನೆಮಾದಲ್ಲಿ ತೋರಿಸೋ ಹಾಗೆಲ್ಲಾ ಇರಲಿಲ್ಲ ಪೋಲಿಸ್ ಸ್ಟೇಶನ್..ಆದರೆ ಇನ್ಸ್ಪೆಕ್ಟರ್ ಖಳನಾಯಕನ ಹಾಗೇ ಇದ್ದ..ಮೀಸೆ..ಬಾಯಲ್ಲಿ ಸಿಗರೇಟು...ಬರೆದಿತ್ತು ಟೇಬಲ್ ಮೇಲೆ 'ಪಿ.ಶಂಕರಗೌಡ ಪಾಟೀಲ್' ಸುಮ್ಮನೆ ಅವರ ಮುಂದೆ ಹೋಗಿ ನಿಂತೆ..ಹದಿನೈದು ನಿಮಿಷವಾದ ಮೇಲೆ ಮಾತು ಪ್ರಾರಂಭಿಸಿದ್ದು ಅವರು...."ಏನ್ ಕೇಸು?".."ಸರ್..ಈ ಮಗು.." ತೊದಲಿದೆ.. "ಯಾರದ್ದು..?" "ಗೊತ್ತಿಲ್ಲ ಸರ್.." ಎಲ್ಲಾ ಕಥೆ ಹೇಳಿಬಿಟ್ಟೆ..ಇನ್ಸ್ಪೆಕ್ಟರ್ಗೆ ಮಾತಾಡಲು ಅವಕಾಶವೇ ಇಲ್ಲದಂತೆ ಬಡಬಡನೆ ..ಎಲ್ಲವನ್ನೂ ..ಆ ಹುಡುಗಿಯನ್ನು ಬಿಟ್ಟು...ಎಲ್ಲವನ್ನೂ. ಇನ್ಸ್ಪೆಕ್ಟರ್ ಒಮ್ಮೆ ಹೀಗೆ ನೋಡಿದ..ನಿಧಾನವಾಗಿ ಹತ್ತಿರ ಬಂದ.."ಬೋ....ಮಗನೆ..ನನ್ಗೇ ಕಥೆ ಹೇಳ್ತೀಯಾ" ಅಂದ ..ನನಗೆ ಶಾಕ್...ಹತ್ತಿರ ಬರುತ್ತಾ ಬರುತ್ತಾ ಬೆಲ್ಟ್ ಬಿಚ್ಚ ತೊಡಗಿದ..ಇನ್ನೇನು ಹೊಡೆದೇ ಬಿಡಬೇಕು...ಡಬ್ ಎಂದು ಶಬ್ದವಾಯಿತು..

ಮಂಚದಿಂದ ಕೆಳಗೆ ಬಿದ್ದಿದ್ದೆ.."ಕಾಲೇಜಿಗೆ ಹೋಗುವ ಹೊತ್ತಾದರೂ ಇನ್ನೂ ಮಲಗೇ ಇದ್ದೀಯಲ್ಲೋ..ಈಗಿನ ಕಾಲದ ಹುಡುಗರೇ ಹೀಗೆ..ಕನಸ್ಕಾಣ್ತಾ ಇರ್ತಾರೆ ....ನಮ್ ಕಾಲ್ದಲ್ಲಿ..."ಏನೇನೋ ಹೇಳುತ್ತಾ ಅಮ್ಮ ಮನೆ ಗುಡಿಸುತ್ತಿದ್ದರು. ಇದೆಲ್ಲಾ ಕನಸಾ.......??? ಹೀಗೂ ಕನಸು ಬಿಳುತ್ತಾ.....ಗಂಟೆ ನೋಡಿದೆ..ಏಳು ಕಾಲು...ಇವತ್ತು ಬಸ್ ಮಿಸ್ಸಾಗುವುದು ಗ್ಯಾರಂಟಿ ಎಂದುಕೊಳ್ಳುತ್ತಾ ಹಲ್ಲುಜ್ಜುವ ಬ್ರಷ್ ಹುಡುಕತೊಡಗಿದೆ...ಆದರೂ ಪಕ್ಕದ ಸೀಟಿನಲ್ಲಿದ್ದ ಹುಡುಗಿ ಚೆನ್ನಾಗಿದ್ದಳು...ಯಾವೂರಿನವಳೋ...ನನ್ನನ್ನು ನೋಡಿಯೂ ನೋಡದಂತ ನೋಟ ಕೊಟ್ಟಳಲ್ಲ...ಯಾಕಿರಬಹುದು...? ಇನ್ನೂ ಉತ್ತರ ಸಿಕ್ಕಿಲ್ಲ ಕಣ್ರೀ...ಹುಡುಕ್ತಾ ಇದ್ದೇನೆ...ದಿನಾ ಬಸ್ಸಿನಲ್ಲಿ...ಉತ್ತರವನ್ನೂ.... ಅವಳನ್ನೂ....


Wednesday, November 12, 2008

ಅರ್ಪಣಾ...


ಇರುವೆಗಳ ಸಾಲು ತುಂಬಾ ಉದ್ದವಿತ್ತು.ಬಹಳ ಉದ್ದ ...ಒಂದರ ಹಿಂದೆ ಒಂದು...ಅದರ ಹಿಂದೆ ಮತ್ತೊಂದು ಬರುತ್ತಲೇ ಇದ್ದವು. ಎಲ್ಲಿಂದ ಬರುತ್ತಿವೆ ? ಎಲ್ಲಿಗೆ ಹೋಗುತ್ತಿವೆ ? ಎಂಬುದು ಪುಟ್ಟಿಗೆ ಪ್ರತಿದಿನದ ಪ್ರಶ್ನೆಯಾಗಿದ್ದರಿಂದ ಅಂದೇನೂ ವಿಶೇಷವಿರಲಿಲ್ಲ. ಪುಟ್ಟಿ ಹಾಗೇನೇ. ಶಾಲೆಗೆ ಹೋಗುವ ಸಂಭ್ರಮದಲ್ಲಿಯೇ ಇರುವೆಗಳು,ಮರಗಳು,ಹಕ್ಕಿಗಳು ಎಲ್ಲರನ್ನೂ ಮಾತಾಡಿಸಬೇಕು.ಆ ಸಮಯದಲ್ಲಿ ಜೊತೆಗಿರುವವರನ್ನು ಸಂಪೂರ್ಣ ಮರೆತುಬಿಡುತಿದ್ದಳು...ಒಮ್ಮೊಮ್ಮೆ ತನ್ನನ್ನೂ ಸಹ.

"ಅರ್ಪಣಾ.." ಮಿಸ್ ಕೂಗಿದರೂ ಪುಟ್ಟಿ ಸುಮ್ಮನಿದ್ದಳು. "ಯೆಸ್ ಮೇಡಂ" ನಾಲ್ಕನೇ ಬಾರಿಗೆ ಕೂಗಿದಾಗ ನೆನಪಾಯಿತು..ತನ್ನ ಹೆಸರು. ಎಲ್ಲರೂ ಪುಟ್ಟಿ ಎಂದೇ ಕೂಗಿ ಕೂಗಿ ಅಮ್ಮ ಪ್ರೀತಿಯಿಂದ ಇಟ್ಟ ಹೆಸರು "ಅರ್ಪಣಾ" ನೆನಪಾಗುವುದು ಶಾಲೆಯಲ್ಲಿ ಮಿಸ್ ಕೂಗಿದಾಗಲೇ. ಆದರೆ ಆ ಹೆಸರಿನ ಅರ್ಥ,ಹಿನ್ನೆಲೆ ಆ ವಯಸ್ಸಿನಲ್ಲಿ ಅವಳಿಗೆ ಅರ್ಥವಾಗುವುದಿರಲಿ,ತಿಳಿಯುವ ಕುತೂಹಲವೂ ಇರಲಿಲ್ಲ.

"ಅಮ್ಮಾ.. ಮಾರ್ಕ್ಸ್ ಕಾರ್ಡ್ ಮೇಲೆ ಅಪ್ಪನ ಸಹಿ ಹಾಕಬೇಕಂತೆ..." ಪುಟ್ಟಿ ಓಡಿ ಬಂದು ಮಾರ್ಕ್ಸ್ ಕಾರ್ಡ್ ಕೊಟ್ಟಳು. "ಪುಟ್ಟೀ... ನಿಂಗೆ ಏನ್ ತಂದಿದೀನಿ ನೋಡು.." ಅಮ್ಮನ ಕೈಲಿದ್ದ ಕಲರ್ ಬಾಕ್ಸ್ ನೋಡಿ ಪುಟ್ಟಿಯ ಮುಖದಲ್ಲಿ ಬಣ್ಣಗಳು ಮಿಂಚಿದವು.ಹಾಗೇ ಕೈಯಿಂದ ಎಳೆದುಕೊಂಡು ಪಕ್ಕದ ಮನೆಯ ಪಾಪುವಿಗೆ ತೋರಿಸಲು ಓಡಿದಳು.. ಎಲ್ಲಾ ಮಕ್ಕಳಂತೆ. ಅಮ್ಮನ ಕಣ್ಣೀರಿನ ಹನಿ ಬಿದ್ದು ಒದ್ದೆಯಾಗಿದ್ದ ಕುಂಚಗಳನ್ನು ಗಮನಿಸಲೇ ಇಲ್ಲ....! ಅಮ್ಮನಿಗೂ ಅದು ಬೇಕಾಗಿರಲಿಲ್ಲ. ಪ್ರತಿ ತಿಂಗಳಿನಂತೆ ಈ ತಿಂಗಳೂ ಪುಟ್ಟಿಯ ಮಾರ್ಕ್ಸ್ ಕಾರ್ಡ್ 'ಎ' ಗ್ರೇಡನ್ನೇ ತೋರಿಸುತ್ತಿದ್ದರೂ ಸಹಿಹಾಕಲು ಇಲ್ಲದ ಅಪ್ಪನನ್ನು ಎಲ್ಲಿಂದ ತರುವುದು? ಇಂದೂ ಸಹ ಪ್ರತಿ ತಿಂಗಳಿನಂತೆ ಮಗಳನ್ನು ಸಂಭಾಳಿಸಿದ್ದಾಯಿತು. ಇನ್ನೆಷ್ಟು ದಿನ ಹೀಗೆ ಅಪ್ಪನ ಸಹಿ ಹಾಕುವುದು..? ಎಲ್ಲಾ ಭಾವನೆಗಳನ್ನು ಆಕೆಯ ಮುಖವೊಂದೇ ತೋರಿಸುತ್ತಿತ್ತು. ನೋಡಲು ಮಾತ್ರ ಯಾರೂ ಇರಲಿಲ್ಲ...

"ಅಮ್ಮಾ ನಾನು ಪೇಂಟಿಂಗ್ ಇವತ್ತೇ ಮಾಡ್ತೀನಿ.." "ಬೇಡಮ್ಮಾ ನಾಳೆ ಮಾಡುವಿಯಂತೆ..ಇವತ್ತಿನ ಹೋಂ ವರ್ಕ್ ಇನ್ನೂ ಮುಗಿಸಿಲ್ಲ.." "ನೋ ಇವತ್ತೇ ಮಾಡ್ತೀನಿ.." ಅಮ್ಮನನ್ನು ದಿಟ್ಟಿಸಿದಳು ಪುಟ್ಟಿ. "ಸರಿ ಏನ್ ಬೇಕಾದ್ರೂ ಮಾಡಿಕೋ..." ಥೇಟ್ ಅವನಂತೆ. ಹಠಮಾರಿ..ಗಂಡಾಗಿ ಹುಟ್ಟಬೇಕಿತ್ತು.ಅಲ್ಲ ಅವನಿಗೆ ನಾ ಹೇಳಿದ್ದನ್ನು ಕೇಳುವ ತಾಳ್ಮೆಯೂ ಇರಲಿಲ್ಲ.. ನನಗೂ ಹೇಳಿದ್ದನ್ನೇ ಹೇಳಲು ಸಮಯುವೂ ಇರಲಿಲ್ಲ. ಅವರೆಲ್ಲಿ ಕೇಳ್ತಾರೆ ? ಗಂಡಸರ ಜಾತಿಯೆ ಇಷ್ಟು.ಅವರಿಗೆ ಬೇಕಾದ ಹಾಗೆ ಕೇಳಲು ನಾವಿದ್ದೀವಲ್ಲ. ಅಂತಹವನನ್ನು ನಾನು ಪ್ರೇಮಿಸುತ್ತಿದ್ದೆ ಎಂದರೆ ಅಸಹ್ಯವಾಗುತ್ತದೆ.ನನ್ನ ಮೇಲೆ, ಆ ನನ್ನ ಮನಸ್ಸಿನ ಮೇಲೆ ಸಿಟ್ಟು ಬರುತ್ತದೆ. ಅವನಿಗೊಪ್ಪಿಸಿದ ಈ ದೇಹವನ್ನು ಸುಟ್ಟು ಬಿಡಬೇಕೆಂದೆನಿಸುತ್ತದೆ..

"ಅಮ್ಮಾ ನಂಗಿದು ಬೇಡ.." ಹಳೆಯ ಕಲರ್ ಬಾಕ್ಸ್ನ್ನು ತೋರಿಸಿ ಪುಟ್ಟಿ ಹೇಳಿದಾಗ ಉಕ್ಕಿ ಬರುತ್ತಿದ್ದ ಭಾವನೆಗಳಿಗೆ ತಡೆ ಹಾಕಿದಳು ಅಮ್ಮ.ಹೊಸದು ಬಂದ ಮೇಲೆ ಹಳೆಯದನ್ನು ಬಿಸಾಕುವ ಬುದ್ದಿ ಅಪ್ಪನದ್ದೇ..ಅಮ್ಮನ ನೋಟಕ್ಕೆ ಉತ್ತರಿಸಲು ತಿಳಿಯದ ಪುಟ್ಟಿಗೆ ಈ ತರಹದ ಸ್ಥಿತಿ ಹೊಸದೇನಲ್ಲ.

ಪುಟ್ಟಿಯನ್ನು ಕಂಡಾಗ ಅಮ್ಮನಿಗೆ ಎಲ್ಲಾ ಭಾವನೆಗಳು ಉಮ್ಮಳಿಸುತ್ತವೆ..ಹಳೆಯದೆಲ್ಲ ನೆನಪಾಗುತ್ತದೆ...ಹಳೆಯದನ್ನೆಲ್ಲ ಮರೆಯಲೂ ಆಕೆಗೆ ಪುಟ್ಟಿಯೇ ಬೇಕು..ಅಮ್ಮನ ಸುಖಕ್ಕೂ ದುಃಖಕ್ಕೂ ಪುಟ್ಟಿಯೇ ಕಾರಣ.. ಅವಳನ್ನು ನೋಡಿಯೇ ಅವಳಿಗಾಗಿಯೇ ಆಕೆ ಇನ್ನೂ ಜೀವಂತವಾಗಿದ್ದಾಳೆ. ಪ್ರತಿದಿನ ಕೆಲಸಕ್ಕೂ ಹೋಗುತ್ತಾಳೆ.. ಅವಳನ್ನು ಕಂಡಾಗ ಜೀವನದಲ್ಲಿ ಹೊಸ ಉತ್ಸಾಹ ಬರುತ್ತದೆ. ಭಾವನಾ ವಾಹಿನಿಗೆ ಪುಟ್ಟಿ ತಡೆ ಹಾಕುತ್ತಾಳೆ..ಅಥವಾ ಅದರ ದಿಕ್ಕು ಬದಲಿಸುತ್ತಾಳೆ. ಅಮ್ಮ ದಿನವೂ ಪುಟ್ಟಿಯ ಮುಖವನ್ನೇ ನೋಡುತ್ತಾ ನಿದ್ದೆ ಹೋಗುತ್ತಾಳೆ....

ಹೊರಗೆ ಮೋಡಗಳು ಡಿಕ್ಕಿ ಹೊಡೆದಾಗಲೇ ಆಕೆ ನಿದ್ರೆಯಿಂದೆದ್ದಿದ್ದು. ಆಮೇಲೆ ನಿದ್ರೆ ಬರಲಿಲ್ಲ.ಮಳೆ ಹೊರಗೆ ಜೋರಾಗಿಯೇ ಇತ್ತು..ಗಡಿಯಾರದ ಸಣ್ಣ ಮುಳ್ಳು ಮಾತ್ರ ಮಿಂಚಿನ ಬೆಳಕಿಗೆ ಗಂಟೆ ಮೂರು ದಾಟಿದ್ದನ್ನು ತೋರಿಸುತ್ತಿತ್ತು. ಇಂತಹದೇ ರಾತ್ರಿಯೊಂದು ನನ್ನ ಬಾಳಿನಲ್ಲಿ ನಡೆಯುತ್ತಿದ್ದ ನಾಟಕದ ಕೊನೆಯ ಅಂಕಕ್ಕೆ ಹಿನ್ನೆಲೆಯೊಂದನ್ನು ಒದಗಿಸಿತ್ತು...ಇಂತಹದೇ ಒಂದು ರಾತ್ರಿ ಅವನು ನನ್ನನ್ನು ಬಿಟ್ಟು ಹೋಗಿದ್ದು..ಮೃಗದಂತೆ ವರ್ತಿಸಿದ್ದು..ಅಂದು ಗಾಳಿ ಇಲ್ಲದೆ ಮಳೆ ಬೀಳುತ್ತಿದ್ದರೂ ಆಕೆಯ ಬಾಳಿನಲ್ಲಿ ಬೀಸಿದ ಬಿರುಗಾಳಿ ಸರ್ವನಾಶವನ್ನುಂಟುಮಾಡಿತ್ತು.
ಮದುವೆಯಾಗಿರಲಿಲ್ಲ ನಿಜ...ಆದರೆ ನಾನು ಅವನ ಹೆಂಡತಿಯಾಗಿದ್ದೆ...ಆತ ನನ್ನ ಗಂಡನಾಗಿದ್ದ....ಇಲ್ಲ ಅವನು ಗಂಡನಾಗಿರಲಿಲ್ಲ ಗಂಡನಂತೆ ನಾಟಕ ಮಾಡಿದ್ದ ...ಎಲ್ಲಾ ಗಂಡಸರಂತೆ. ನಾನು ಅವನಿಗೆ ಎಲ್ಲವನ್ನೂ ಕೊಟ್ಟೆ. ಮನಸ್ಸು,ಹೃದಯ ,ದೇಹ....ಎಲ್ಲಾ..ಆದರೆ ಆತ ...? ನನಗೇನಾದರೂ ಆತ ಕೊಟ್ಟಿದ್ದರೆ ಅದು ಪುಟ್ಟಿ ಒಂದೇ...ನನ್ನನ್ನೇ ನಾನು ಆತನಿಗೆ ಅರ್ಪಿಸಿಕೊಂಡಿದ್ದಕ್ಕಾಗಿ "ಅರ್ಪಣಾ" ಎಂದು ಹೆಸರಿಟ್ಟವಳೂ ನಾನೇ..ನಾನೇನಾದರೂ ಜೀವಂತವಾಗಿದ್ದರೆ ಅದು ಪುಟ್ಟಿಗಾಗಿಯೇ ..ಪುಟ್ಟಿ ನನ್ನ ಜೀವ...

ಮಳೆ ಇನ್ನೂ ಜೋರಾಯಿತು..ಮನೆಯ ಸೋರುವ ಮಾಡಿನಿಂದ ಬಿದ್ದ ಮಳೆಯ ಹನಿ ಕಣ್ಣೀರಿನ ಜೊತೆ ಬೆರೆತು ನೆಲದಲ್ಲಿ ಇಂಗಿ ಹೋಗುತ್ತಿತ್ತು...ಮಳೆಯ ಸದ್ದಿಗೆ ಅಂತರಂಗದ ಆರ್ತನಾದ ಕೇಳದಾಯಿತು...ಆಕೆಯ ಮುಖದಲ್ಲಿದ್ದ ಪ್ರಶ್ನಾರ್ಥಕ ಚಿಹ್ನೆ ಅತ್ತಂತೆ ಕಾಣುತ್ತಿತ್ತು.. ನೋಡಲು ಮಾತ್ರ ಯಾರೂ ಇರಲಿಲ್ಲ...

ಆಕೆ ಜೀವಂತವಾಗಿದ್ದಾಳೆ.ಮಂಜಾಗಿರುವ ಕಣ್ಣಿಂದಾಗಿ ಏನೂ ಕಾಣೀಸುತ್ತಿಲ್ಲ ಅಷ್ಟೆ..ಗಂಟೆಯೂ ಜಾಸ್ತಿಯೇನಾಗಿಲ್ಲ .ದಿನಕ್ಕಿಂತಲೂ ಸ್ವಲ್ಪ ತಡವಾಯಿತು. ತಿನ್ನಲು ಉಪ್ಪಿಟ್ಟು ಮಾಡಿ ಪುಟ್ಟೀಗೆ ಶಾಲೆಗೆ ಹೋಗಲು ರೆಡಿ ಮಾಡಲು ಇನ್ನೇನು ಎರಡು ಗಂಟೆ ಸಾಕು ಎಂದುಕೊಂಡು ಎದ್ದಳು.ಪುಟ್ಟಿ ಇನ್ನೂ ಎದ್ದಿಲ್ಲ...ರಾತ್ರಿ ಅರ್ಧ ಮಾಡಿದ್ದ ಪೇಂಟಿಂಗ್ ಅಲ್ಲೇ ಪಕ್ಕದಲ್ಲಿ ಬಿದ್ದಿತ್ತು..ಪುಟ್ಟಿಯ ಪೇಂಟಿಂಗ್ ಎಂದರೆ ಅದು ಬಣ್ಣಗಳ ಚೆಲ್ಲಾಟ ಅಷ್ಟೇ ..ಮತ್ತೇನೂ ವಿಶೇಷವಿಲ್ಲ...ಆದರೆ ಅವಳಿಗೆ ಆಕೆಯ ಛಿದ್ರ ಬದುಕು ಅದರಲ್ಲಿ ಕಂಡಿತು...ಛಿದ್ರ ಮನಸೂ ಕಂಡಿತು...

ಆತ ಹೊರಗಡೆ ಕಾಯುತ್ತಿದ್ದ. ಪುಟ್ಟಿಗಾಗಿ ...ಈತ ಅವನಲ್ಲ. ಅವನಂತೆಯೂ ಇಲ್ಲ ..ಆದರೂ ಅವನನ್ನು ಈ ನನ್ನ ಮನಸ್ಸು ನಂಬುತ್ತಿಲ್ಲ ...ಗಂಡಸರೇ ಇಷ್ಟು..ನಂಬಿಕೆಗೆ ಅರ್ಹರಲ್ಲ... ಆದರೂ ಈತ ಜಾಣ... ಎಂತಹವರ ನಂಬಿಕೆಯನ್ನೂ ಪಡೆಯಬಲ್ಲ.. ಒಳ್ಳೆಯವನೇ.. ಆದರೆ ಅನನುಭವಿ..ಎಷ್ಟಾದರೂ ನನ್ನಷ್ಟು ಅನುಭವವಿರಲು ಸಾಧ್ಯವೇ ಇಲ್ಲ ... ಎಲ್ಲವನ್ನೂ ಅನುಭವಿಸಿಬಿಟ್ಟಿದ್ದೇನೆ ನಾನು....

ಇವನಿಗೂ ಪುಟ್ಟಿಯನ್ನು ಕಂಡರೆ ಪಂಚಪ್ರಾಣ ..ನಿನ್ನೆ ಕಲರ್ ಬಾಕ್ಸ್ ತಂದವನೂ ಅವನೇ..ವಯಸ್ಸಿನಲ್ಲಿ ಚಿಕ್ಕವನಾದರೂ ಒಂಥರಾ ಗೌರವ..ಅಭಿಮಾನ..ಕೆಲಸಕ್ಕೆ ಸೇರಿ ಹದಿನೈದು ದಿನಗಳಾದ ಮೇಲೇ ನನ್ನ ಜೊತೆ ಆತ ಮಾತನಾದಲು ಪ್ರಾರಂಭಿಸಿದ್ದು..ಮಾತು ಕಡಿಮೆ ..ಮೌನ ಜಾಸ್ತಿ.. ಹೀಗಂತ ಇವನಿಗೆ ಪುಟ್ಟಿಯ ಮಾರ್ಕ್ಸ್ ಕಾರ್ಡ್ ಮೇಲೆ ಸಹಿ ಹಾಕುವ ಅಧಿಕಾರ ಕೊಡಲೇ...ನನ್ನ ಮನಸ್ಸಿನಲ್ಲಿ ಜಾಗ ಕೊಡಲೇ ಸಾಧ್ಯವೇ ಇಲ್ಲ....ಕೊಡಲು ಜಾಗವೆಲ್ಲಿದೆ?ಮನಸ್ಸು ಚೂರು ಚೂರಾಗಿದೆಯಲ್ಲವೇ? ...

ಆತ ಮಾತಾಡಲಿಲ್ಲ.. ಆಕೆಯೂ..ಪುಟ್ಟಿ ರೆಡಿಯಾದಳು.ದಿನವೂ ಅವನ ಜೊತೆಗೇ ಶಾಲೆಗೆ ಹೋಗುವುದು.ಬರುವುದೂ ಅವನ ಜೊತೆಗೇ...ಸಮಾಜದ ಬಗ್ಗೆ ಆಕೆಗೆ ಚಿಂತೆಯಿಲ್ಲ .. ಪುಟ್ಟಿಯದೊಂದೇ ಚಿಂತೆ....ಆಕೆಯ ಮನಸ್ಸು ಎರಡಾಗಿ ಹೊಡೆದಾಡುತ್ತಿದ್ದವು...ಎರಡಕ್ಕೂ ಅಪಾಯವಾಗದಂತೆ ಮನಸ್ಸಿಗೆ ಬೆಸುಗೆ ಹಾಕುವ ಕಾರ್ಯವೂ ನಡೆದಿತ್ತು....

ಆತ ಮಾತಾಡಿದ್ದ ..."ಆದರೆ ಪುಟ್ಟಿಗೆ ಅಪ್ಪ ಬೇಡವೇ?" ಬೇಕು.. ಮಾರ್ಕ್ಸ್ ಕಾರ್ಡ್ ನಲ್ಲಿ ಸಹಿ ಹಾಕಲು...ಕಲರ್ ಬಾಕ್ಸ್ ತಂದುಕೊಡಲು...ಶಾಲೆಗೆ ಕರೆದೊಯ್ಯಲು....ನನಗೆ ಬೇಡ ..ಆದರೆ ಪುಟ್ಟಿಗೆ ಅಪ್ಪ ಬೇಕು..ಪುಟ್ಟಿಗೂ ಅಪ್ಪ ಬೇಕು.. ಅವರಿಬ್ಬರೂ ಹೋಗಿಯಾಗಿತ್ತು..ದೊಡ್ಡ ಮುಳ್ಳು ಹನ್ನೆರಡರ ಮೇಲೂ ಸಣ್ಣದು ಎಂಟರ ಮೇಲೂ ಏರಿ ಕೂರಲು ಪೈಪೋಟಿ ನಡೆಸಿದ್ದವು...ಆಕೆ ಕೆಲಸಕ್ಕೆ ಹೋಗಲು ಅಣಿಯಾದಳು..ಪುಟ್ಟಿಯ ಪೇಂಟಿಂಗ್ ಎತ್ತಿಟ್ಟು ಆಫೀಸಿಗೆ ಹೊರಟಳು.

ಆಕೆ ಮಾತಾಡಿದಳು "ಪುಟ್ಟಿಗೆ ಅಪ್ಪ ಬೇಕು..".

ಆತನೂ ಮಾತಾಡಿದ....."ನಿನಗೆ ....?"

" "

" " ...ಮೌನ ಮಾತಾಡಿತು.

ಪುಟ್ಟಿಗೆ ಹೆಚ್ಚೇನೂ ವ್ಯತ್ಯಾಸವಾಗಿಲ್ಲ.ಅವಳಿಗೆ ಮುಖದಲ್ಲಿ ಗೊಂದಲಗಳಿಲ್ಲದ ಹೊಸ ಅಮ್ಮ ಸಿಕ್ಕಿದ್ದಾಳೆ.ಹೊಸ ಅಪ್ಪ ಸಿಕ್ಕಿದ್ದಾನೆ. ಮೊದಲಿನಂತೇ ಶಾಲೆಗೆ ಕರೆದೊಯ್ಯುತ್ತಾನೆ.ಬರುವಾಗಲೂ ಜೊತೆಗಿರುತ್ತಾನೆ..ಹೊಸ ಕಲರ್ ಬಾಕ್ಸ್ ತಂದಿದ್ದಾನೆ..ಈಗ ಪುಟ್ಟಿಯೂ ಪೇಂಟಿಂಗ್ಗೆ ಆಕಾರ ನೀಡುವುದನ್ನು ಅವನಿಂದ ಕಲಿಯುತ್ತಿದ್ದಾಳೆ...ಸೋರುತ್ತಿದ್ದ ಮನೆಯ ಮಾಡು ರಿಪೇರಿಯಾಗಿದೆ..ಅವನೇ ಏಣಿ ಹತ್ತಿ ಮಾಡಿದ್ದಾನೆ...

ಇರುವೆಗಳ ಸಾಲು ಅಷ್ಟೇ ಉದ್ದ ......ಅವು ಎಲ್ಲಿಂದ ಬರುತ್ತಿವೆ? ಎಲ್ಲಿಗೆ ಹೋಗುತ್ತಿವೆ ? ಎಂಬುದು ಇನ್ನೂ ಪುಟ್ಟಿಗೆ ಬಿಡಿಸಲಾರದ ಪ್ರಶ್ನೆ ಮತ್ತು ಉತ್ತರ ಹುಡುಕುವ ಅವಶ್ಯಕತೆ ಅವಳಿಗೀಗಿಲ್ಲ.